ಮತ್ತೆ ವಿವಾದದಲ್ಲಿ ಸಂಯುಕ್ತ ಹೆಗ್ಡೆ!

by November 28, 2017 0 comments
- ಶ್ರಮಣ್ ಜೈನ್.

ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗ್ಡೆ ಮತ್ತೆ ಸುದ್ದಿಯಲ್ಲಿದ್ದಾರೆ. 'ಕಾಲೇಜ್ ಕುಮಾರ್' ಚಿತ್ರ ಪ್ರಾರಂಭ ಆಗುವ ಮೊದಲಿನಿಂದ ಕಿರಿಕ್ ಮಾಡಿಕೊಂಡಿದ್ದ ನಟಿ, ಇದೀಗ ಸಿನೆಮಾ ರಿಲೀಸ್ ಆಗಿದ್ದರೂ ಅದರಿಂದ ಹೊರ ಬಂದಂತೆ ಕಾಣುತ್ತಿಲ್ಲ.

'ಕಾಲೇಜ್ ಕುಮಾರ್' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುತ್ತಿಲ್ಲ ಎಂದು ನಿರ್ಮಾಪಕ ಪದ್ಮನಾಭ್ ಸಂಯುಕ್ತ ವಿರುದ್ದ ಕಿಡಿ ಕಾರಿದ್ದಾರೆ. ಈ ಸಂಬಂಧ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ.

ಇಷ್ಟೇ ಅಲ್ಲದೆ, ಸಂಯುಕ್ತ ವಿರುದ್ಧ ಕಲಾವಿದರ ಸಂಘ, ನಿರ್ದೇಶಕ ಮತ್ತು ನಿರ್ಮಾಪಕ ಸಂಘಗಳಿಗೂ ದೂರು ನೀಡಲು ಪದ್ಮನಾಭ್‌ ನಿರ್ಧರಿಸಿದ್ದಾರೆ. ''ಇವರನ್ನು ತಮ್ಮ ಚಿತ್ರಗಳಿಗೆ ಆಯ್ಕೆ ಮಾಡಿಕೊಳ್ಳುವ ಮೊದಲು ನಿರ್ಮಾಪಕರು ಒಮ್ಮೆ ಯೋಚಿಸಬೇಕಿದೆ. ನನಗಾದ ತೊಂದರೆ ಬೇರೆ ನಿರ್ಮಾಪಕರಿಗೆ ಆಗಬಾರದು. ಒಬ್ಬ ನಿರ್ಮಾಪಕ ಉಳಿದರೆ ನೂರು ಕುಟುಂಬ ಉಳಿಯುತ್ತೆ'' ಎಂದು ಬೇಸರದಿಂದ ನುಡಿದಿದ್ದಾರೆ.

"ಒಬ್ಬ ಕಲಾವಿದೆಯಾಗಿ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ತೊಂದರೆ ಕೊಡಬಾರದು, ಪ್ರೋತ್ಸಾಹಿಸಬೇಕು. ೯೦ ದಿನ ಒಂದೇ ಕುಟುಂಬದ ರೀತಿ ಇದ್ದೆವು. ಪತ್ಯೇಕ ಕ್ಯಾರವಾನ್‌ ಮತ್ತು ಊಟ ಕೊಟ್ಟಿದ್ದೇವೆ. ಆದರೆ, ಇವತ್ತು ನಮ್ಮ ಊಟಕ್ಕೇ ಕಲ್ಲು ಹಾಕಿದ್ದಾರೆ. ಬಹಳ ಬೇಸರವಾಗಿದೆ' ಎಂದು ನಿರ್ಮಾಪಕ ಪದ್ಮನಾಭ್‌ ಹೇಳಿದ್ದಾರೆ.